ಐಫಲ್ ಗೋಪುರ: ಫ್ರಾನ್ಸ್‌ ದೇಶದ ಪ್ಯಾರಿಸ್ ನಗರದಲ್ಲಿರುವ ಮಹಾನ್ ಗೋಪುರ. ಪ್ಯಾರಿಸಿನ ವಸ್ತುಪ್ರದರ್ಶನಕ್ಕೋಸ್ಕರ ಇದನ್ನು ನಿರ್ಮಿಸಲಾಯಿತು (1889). ಫ್ರಾನ್ಸ್‌ ದೇಶದ ಪ್ರಸಿದ್ಧ ಇಂಜಿನಿಯರ್ ಮತ್ತು ಸೇತುವೆ ನಿರ್ಮಾಣಕಾರನಾದ ಅಲೆಕ್ಸಾಂಡರ್ ಗಸ್ಟಾವ್ ಐಫಲ್ ಈ ಪ್ರಖ್ಯಾತ ಗೋಪುರವನ್ನು ರೂಪಿಸಿ, ನಿರ್ಮಿಸಿದ. (ನೋಡಿ- ಐಫಲ್,-ಅಲೆಕ್ಸಾಂಡರ್-ಗಸ್ಟಾವ್) ಈತನ ಹೆಸರನ್ನೇ ಗೋಪುರಕ್ಕೆ ಇಡಲಾಗಿದೆ.

ಪ್ಯಾರಿಸಿನ ಚ್ಯಾಂಪ್ ಡಿ ಮಾರ್ಸ್ನಲ್ಲಿರುವ ಈ ಬೃಹದ್ಗೋಪುರದ ಎತ್ತರ 298 ಮೀ. ಸುಮಾರು 340 ಚ.ಅ. ಜಾಗವನ್ನಿದು ಆಕ್ರಮಿಸಿದೆ. ಮೆದು ಕಬ್ಬಿಣದಿಂದಾದ ಇದರ ತೂಕ 7,300 ಟನ್ನುಗಳು. ಇದರ ನಿರ್ಮಾಣಕ್ಕೆ ಹತ್ತು ಲಕ್ಷಕ್ಕಿಂತ ಹೆಚ್ಚು ಡಾಲರುಗಳನ್ನು ವ್ಯಯಮಾಡಲಾಗಿದೆ. ಈ ಗೋಪುರದಿಂದಾಗಿ ಪ್ಯಾರಿಸಿನ ಸೌಂದರ್ಯ ಹೆಚ್ಚಿದೆ. 63 ಜನರನ್ನು ಒಟ್ಟಿಗೆ ಒಯ್ಯಬಲ್ಲ ಮೂರು ವಿದ್ಯುಚ್ಚಾಲಿತ ಎತ್ತಿಗೆ ಯಂತ್ರಗಳು ಕುತೂಹಲವುಳ್ಳವರನ್ನು ಗೋಪುರದ ತುದಿಗೊಯ್ಯುತ್ತವೆ. ಗೋಪುರದ ನೆತ್ತಿಯಿಂದ ಸುತ್ತಲ 136 ಕಿಮೀಗಳ ದೃಶ್ಯ ಗೋಚರವಾಗುತ್ತವೆ. ಹೀಗಾಗಿ ಪ್ರವಾಸಿಗಳ ಮುಖ್ಯ ಆಕರ್ಷಣೆಗಳಲ್ಲಿ ಇದೂ ಒಂದಾಗಿದೆ. ಇದರಲ್ಲೇ 55' ಎತ್ತರದ ಪ್ರಸಾರ ಕೇಂದ್ರವನ್ನು ಅಳವಡಿಸಲಾಗಿದೆ.                                       				          (ಎಂ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ